ಡೊಂಕು

ಕಥಾ ಸಂಗಾತಿ

ಡೊಂಕು

ವಿಜಯಾಮೋಹನ್

10 Modernist Art Movements | Britannica

: ಅಕ್ಕಯ್ಯನೆದೆಯೊಳಗೆ ಬಗೆ ಬಗೆದು ಬಿತ್ತಿದ್ದ ಚಿಂತೆಗಳೆಂಬ ತರಾವರಿ ಬೀಜಗಳು, ಅವು ಒಂದಲ್ಲ ಎರಡಲ್ಲ, ಮೂರು ಸಂಗತಿಗಳು  ಮೊಳಕೆಯೊಡಕೊಂಡು.  ಪೈರುಗಳಾಗಿ ಬೆಳೆಯುವಾಗ, ಅವುಗಳನ್ನ ಬುಡ ಸಮೇತ ಕಿತ್ತೆಸೆಯಲಾಗದೆ, ಅವಳೊಳಗವಳು ಖಿನ್ನಳಾಗುತ್ತ ಕುಂತು, ಇಂಗೆ ಗರ ಬಡದೋನಂಗೆ ಕುಂತಿರುವ ಮಗನನ್ನು ನೋಡುತ್ತಿದ್ದರೆ. ಬೆಳಗಾ ಸಂಜೇಲಿ ಆ ಚಿಂತೆಯ ಪೈರುಗಳಿಗೆ ನೋವೆಂಬ ನೀರು ಜಿನುಗುತ್ತಿತ್ತು.  

    ಅವಳ ಮನೇಲಿ ಅವಳಿಗಿದ್ದದ್ದು ಒಂದೇ ಒಂದು ಗಂಡುಡಗ. ನೆಲಕ್ಕೆ ಬಿಟ್ಟರೆ ಎಲ್ಲಿ ಮಣ್ಣಾಗ್‌ತ್ತಾನೊ? ಅನ್ನುವಂತ ನಯಾ-ನಾಜೋಕಿನೊಳಗೆ ಸಾಕಿದ್ದಳು. ಅವನು ಅಂಗೆ ಅಷ್ಟೇ ಭಯ-ಭಕುತಿಯಿಂದ ಬೆಳೆದು ವಯಸ್ಸಿಗೆ ಬಂದು ನಿಂತ ಹುಡುಗ. ನಾನೆಂದರೆ ನನ್ನ ಇರುವೆಂದರೆ ಎಲ್ಲೂ ಮುಕ್ಕಾಗಬಾರದು. ಅನ್ನುವಂತ ಮಗನನ್ನ ಪಡೀಬೇಕಾದ್ರೆ. ಅಕ್ಕಯ್ಯ ಕೂಡ ಯಾವ ಜನುಮದಲ್ಲಿ? ಯಾವ್‌ದೇವ್ರಿಗೆ? ಅದೆಂತ ಹೂವ್ವಾ ಮುಡಿಸಿದ್ಲೋ ಏನೊ? ಅಂತ ಮಗನ ಹೆಸರು ಪ್ರಸನ್ನ, ಹೆಸರಿಗೆ ಸರಿಯಾಗಿ ತೂಕವಾದ ಹುಡುಗ, ಅಂತವನು ಕೂಡ ಅವಳ ಜೊತೇಲಿ ಹಿಟ್ಟು ನೀರು, ನಿದ್ದೆ ನಿಲುವು ಅನ್ನುವುದನ್ನೆ ಬಿಟ್ಟು. ಚಿಂತೆಯ ಸಂತೇಲಿ ಕುಂತು- ಮಕನಾಗೆ ಕುಂತು ಬಿಡಂಗಾದ, ಅದು ಯಾಕೆನ್ನುವ ಪ್ರಶ್ನೆಗಳು, ಅಕ್ಕಯ್ಯ ಮತ್ತು ಪ್ರಸನ್ನನ ಎದೆಯೊಳಗೆ ಗುಂಗೆ ಹುಳುವಾಗಿ ಕೊರಿಯಾಕಿಡಿದವು. ಬ್ಯಾರೆಯವರಿಗೆ ಅಷ್ಟಾಗಿ ಗೊತ್ತಾಗ್‌ಲಿಲ್ಲ,

  ಪ್ರಸನ್ನ ಹುಟ್ಟಿ-ಬೆಳೆದ ಇಷ್ಟೊರುಷದಲ್ಲಿ, ಯಾರ್ ತಂಟಿಗು ಹೋಗದ ಹುಡುಗ. ಈಗ ಐದಾರು ವರ‍್ಷದಿಂದ ಈಚೆಗೆ, ಅದು ಯಂತ ಶನಿ ಎಗಲೇರಿಬಿಡತೊ ಏನೊ? ಅವನು ಮಾಡದ ತಪ್ಪುಗಳೆಲ್ಲ ಅವನಿಗೆ ತಿರುಗಿಸಿ ಛಾಟಿಯಂತೆ ಬೀಸಾಕಿಡದ್‌ವು. ಅಂಗಾಗೆ ಅವನು ಕುಂತು ಮಕನಾಗೆ ಕುಂತಿದ್ದ. ಅವನ ಮುಂದೆ ಬಾಯಿ ಬಿಟ್ಟುಕೊಂಡು ಉರಿಯುತ್ತಿರುವ ಸೂರ‍್ಯನು ಇದ್ದ. ಕವ-ಕವನೆಂದು ಕಣ್ಣು ಮುಚ್ಚಿಕೊಂಡು ಸುರಿಯುತ್ತಿರುವ ಕತ್ಲೇನು ಇತ್ತು. ಆದರೆ ಇದ್ಯಾವುದುನ್ನು ನಿಗಾ ಮಾಡಲಾರದಂತ ಮನಸ್ಸಿನೊಳಗೆ ಮನಸ್ಸಿಲ್ಲದ ಪ್ರಸನ್ನನೆಂಬುವನನ್ನು.ನೋಡಿದ-ಮಕನಾಗಿ ನೋಡುತ್ತಿರುವ ಅಕ್ಕಯ್ಯನ ಎದೆಯೊಳಗೆ. ಆ ಚಿಂತೆಯ ಪೈರುಗಳು ತರಾವರಿಯಾಗಿ ತೂಗಾಡುತ್ತಿದ್ದವು.

ಇದ್ಯಾಕಲ ಪ್ರಸನ್ನ ಕೆಲಸಿಲ್ಲ ಕಾರ‍್ಯವಿಲ್ಲ, ಬರಿ ಕುಂತು ಮಕನಾಗೆ ಸುಮ್ಮನೆ ಕುಂತಿದ್ದೆ ಆಯಿತಲ್ಲಲೆ? ಎಂದು  ಆ ಪಕ್ಕದ ಮನೆ ಮಲ್ಲೇಶನ ಮಾತೆನ್ನುವುದು. ಆಗತಾನೆ ಅವನ ಮೊಣಕಾಲಿನವರೆಗು ಮೊಡಚಿಕೊಂಡಿದ್ದ ಮಾಸಲು ಲುಂಗಿಯನ್ನ. ಕಾಲಿನ ಪಾದದವರೆಗೆ ಇಳಿಯ ಬಿಟ್ಟು, ಅವನ ಎದೆ ತಳ್ಳಿ ಬಂದ ದೊಡ್ಡುಸಿರು ಕಕ್ಕಿ, ಆ ಕಲ್ಲು ಬೆಂಚಿನ ಮ್ಯಾಲೆ ಕುಂಡಿ ಊರಿದ್ದ ಪ್ರಸನ್ನನ ಕಿವಿಗೆ ತಾಕತು. ರಭ-ರಭನೆ ಯಾರೊ ಕೆನ್ನೆಗೆರಡು ಬಾರಿಸಿದಂತಾಯಿತು. ಲೇ ನಾನ್ ನಮ್ಮನೆ ಬಾಗ್ಲಲ್ಲಿ ಕುಂತಿದ್ರೆ ನಿನಗೇನಲ ಇಕ್ಕಟ್ಟು? ಏನ್ ನಿನ್ ಪಂಚೆ ಬಾಗ್ಲಿಗೇನಾರ ಬಂದು ಕುಂತಿದ್ದಿನೇನಲ? ಪ್ರಸನ್ನನ ಬಾಯೊಳಗೆ ಬಂದ ಮಾತು ಅಷ್ಟೇ ಗಡುಸಾಗಿ ಇತ್ತು. ಎಂದು ಯಾವತ್ತು ಅವನ ಬಾಯಲ್ಲಿ ಅಂತ ಗಡುಸಿನ ಮಾತುಗಳೆ ಬರ್‌ತಿರಲಿಲ್ಲ.

ಕೆಲಸಿಲ್ಲ-ಕಾರ‍್ಯವಿಲ್ಲದಂಗೆ ಕುಂತುಬಿಟ್ಟಲ್ಲೊ? ಎಂದ ಪಕ್ಕದ ಮನೆ ಮಲ್ಲೇಶನ ಮಾತು ದಿಟದಲ್ಲಿ ದಿಟವಾದ ಸುಳ್ಳು. ಯಾಕೆಂದರೆ ಪ್ರಸನ್ನನನ್ನು ಹುಡುಗನಿಂದಲು ಹೆತ್ತು ಹೊತ್ತು ಸಾಕಿರುವ. ನಮ್ಮ ಅಕ್ಕಯ್ಯನಿಗೆ ಗೊತ್ತು. ಯಾವತ್ತು ಅವನು ಕೆಲಸ ಕಾರ‍್ಯವಿಲ್ಲದೆ ಅಷ್ಟು ಸಲೀಸಾಗಿ ಹಿಟ್ಟುಂಡ ಹುಡುಗನೆ ಅಲ್ಲ. ಅಂತ ಸೊಂಬೇರಿ ಊಟವೆನ್ನುವುದು ನನ್ ಮನಸ್ಸಿಗೆ ಹಿಡಿಯೋದು ಇಲ್ಲ, ನನ್ ಮೈಗೆ ದಕ್ಕೋದು ಇಲ್ಲ, ಎಂದು ಸದಾ ಹೇಳುತ್ತಿದ್ದ ಪ್ರಸನ್ನ. ಬೆಳಕರಿದು ಎದ್ದರೆ ಸಾಕು ಏನಾದರೊಂದು ಕೆಲಸವನ್ನ ಹುಡುಕೇ ಹುಡುಕ್‌ತ್ತಿದ್ದ. ಅಕಸ್ಮಾತ್ತಾಗಿ ಆವತ್ತೇನು ಕೆಲಸಿಲ್ಲವೆಂದ್ರೆ ನಿಂತಿರೊ ಕಂಬಾನಾದ್ರು ಸುತ್ತುತೀನಿ ಬಿಡಮ್ಮ, ಅನ್ನುವಂತ ಉಮ್ಮಸ್ಸಿನ ಹುಡುಗ.  ಅಂತವನು ಇದ್ದೂರಿನ ಏಳನೇ ಕ್ಲಾಸಿನ್‌ವರೆಗು ಅಷ್ಟೇ ಚೆನ್ನಾಗಿ ಓದಿ, ಪಕ್ಕದೂರಿನ ಮುದ್ದೇನಹಳ್ಳಿ ಐಸ್ಕೂಲಿನಲ್ಲು, ನೂರಕ್ಕೆ ಎಂಬತ್ತು ಪರ‍್ಸೆಂಟು ನಂಬರ್ ತಗದು. ಎಸ್.ಎಸ್.ಎಲ್.ಸಿ ಪಾಸ್ ಮಾಡಿಕೊಂಡಿದ್ದ. ಜೊತೆಗೆ ಮನೆಯ ದನಕರುಗಳನ್ನ ಮೇಯಿಸುತ್ತಿದ್ದ. ಸೊಪ್ಪು-ಸೌದೆ ಹುಲ್ಲು ನೀರೆನ್ನುವ ಉಸಿರುಳಿಯುವ ಆದಾರಗಳನ್ನು ಆ ಮನೆಗಾಗಿ ಹೊಂಚಿಕೊಡುತ್ತಿದ್ದ. ಅಂಗೆ ಬ್ಯಾಸಿಗೆ ರಜ ದಸರ ರಜೆಯೊಳಗೆಲ್ಲ, ಯಾವ ನೆಂಟ್ರು ಗಿಂಟ್ರು ಊರುಗಳಿಗೆ ಹೋಗ್‌ದಂಗೆ. ತೆಂಗಿನ ತೋಟಗಳಲ್ಲಿ ಕಾಯಿ ಕೀಳುವ ನಿಪುಣನಾಗಿದ್ದ. ಯಾರು ಎಷ್ಟೊತ್ತಿನಲ್ಲಿ ಕರದ್ರು ಹೋಗಿ,ಕಾಯಿಗಳನ್ನು ಕಿತ್ತುಕೊಡುತ್ತಿದ್ದ ಮಗನನ್ನು ಕಂಡು. ಲೇ ನೀನು ಬರಿ ಕಾಯಿ ಕೀಳದ್ರಲ್ಲೆ ಕಾಲ ನೂಕ್‌ಬ್ಯಾಡವೊ? ಮುಂದಕ್ಕೆ ಇನ್ನೇನಾದ್ರು ದೊಡ್‌ದಾಗಿ ಓದ್‌ಬೇಕ್ ಕಣಪ್ಪ ಎಂದು ಕೊರಗುತ್ತಿದ್ದ. ಅಮ್ಮನ ಮಾತನ್ನು ಅಂಗೆ ಮನಸ್ಸಿಗಾಕಿಕೊಂಡ. ಅವನ ಜೊತೆಗಾರರು ಮೇಷ್ಟುç ಟ್ರೆöನಿಂಗ್  ಮುಗಿಸಿಕೊಂಡಿದ್ದವರು ಕೆಲಸಕ್ಕು ಸೇರ್ ಕಂಡ್ರು, ನಾನು ಸುಮ್ಮನಿದ್ರೆ ಆಗಲ್ಲ? ಇಂತಾ ಮೇಷ್ಟ್ರು ಆಗ್‌ಬೇಕೆಂಬ ಛಲ ಅವನಲ್ಲು ಬಂತು, ಎರಡೊರುಷ ಸಿ.ಪಿ.ಎಡ್ ಟ್ರೈನಿಂಗ್ ಅನ್ನೊದನ್ನ ಮುಗಿಸಿಕೊಂಡು ಬಂದ, ಬರಿ ಒಂದರಿಂದೆ ಒಂದು ಮೂರು ಹೆಣ್ಣುಮಕ್ಕಳನ್ನೆ ಸಾಕಿ ಬೆಳಸಿದ್ದ. ಅವನ ಸ್ವಾದ್ರಮಾವ ಸರ‍್ವೆ ಅಪೀಸೊಂದರಲ್ಲಿ ಕೆಲಸದಲ್ಲಿದ್ದವನು. ಅವನ ಕಣ್ಣೇಂಬೋವು ಜನವನ್ನಾಗ್‌ಲಿ-ನೆಲವನ್ನಾಗ್‌ಲಿ ಅಷ್ಟಾಗಿ ನೋಡ್‌ತಿರಲಿಲ್ಲ. ಅಂತ ದಿಮಾಕಿನ ಮಾವನ ಮುಂದೆ, ಅಣ್ಣಯ್ಯ ನಿಮ್ಮುಡುಗುರು ಮಾತ್ರ ಜಾಸ್ತಿ-ಜಾಸ್ತಿ ಓದ್‌ಕಂತಾ ಅವರೆ. ನನ್ನುಡುಗನ ಬದುಕು ಬರಿ ಕೂಲಿ ನಾಲಿ ಅನ್ನೋದರಲ್ಲೆ ಮುಗಿಬೇಕಾ? ಎಂದು  ಯಾವಾಗ್‌ಲು  ಮುಖಾ ಕಿವುಚಿಕೊಂಡು ಮಾತಾಡ್‌ತಿದ್ದ. ಪ್ರಸನ್ನನ ಅಮ್ಮನ ಮಾತಿಗೆ. ಅಣ್ಣನೆಂಬೋನು ಕಟ್ಟು ಬಿದ್ದು. ಒಳ್ಳೆ ಪ್ರವೇಟ್ ಇಸ್ಕೂಲಿಗೆ ಪ್ರಸನ್ನನನ್ನು ಪಿ.ಟಿ ಮೇಷ್ಟ್ರಾಗಿ ಕೆಲಸಕ್ಕೆ ಸೇರಿಸಿಬಿಟ್ಟಿದ್ದ. ಅಂತ ಇಸ್ಕೂಲು ಮುಂದೊಂದು ದಿನ ಪರಮ್‌ನೆಂಟು ಸಂಬಳ ಕೊಡುತ್ತೆ ಕಣಮ್ಮ, ಎಂದು ನೆಚ್ಚಿಕೊಂಡಿದ್ದ ಪ್ರಸನ್ನನ ಭರವಸೆಯ ಮಾತಿಗೆ. ಅವಳು ನಮ್ಮಕ್ಕಯ್ಯನಿಗಿದ್ದ ಬಂಗಾರ್‌ದಂತ ಅರ‍್ದ ಎಕರೆ ಹೊಲಾನು ಮಾರಿ. ಲಕ್ಷದ ಇಪ್ಪತ್ತು ಸಾವಿರ ದುಡ್ಡು ಕಟ್ಟೀಳು.

    ಇನ್ನೂರರಿಂದ ಇನ್ನೂರೆಂಬತ್ತರವರೆಗು ಸ್ಟ್ರೆಂತ್ ಇದ್ದ ಮಕ್ಕಳ ಇಸ್ಕೂಲಿನೊಳಗೆ. ಮೇಷ್ಟ್ರು   ಮೇಡಮ್‌ಗಳು ಇವನಿಗಿಂತ ಒಂದು ನಾಕೆಜ್ಜೆ ಲೆವಲ್ಲಾಗಿದ್ದವರು. ಇವನು ದಿನಾ ತೊಡೊ ಬಟ್ಟೆಯಿಂದ ಹಿಡುಕೊಂಡು, ಅವನು ಮಧ್ಯಾಹ್ನ ತಿನ್ನೊ ಊಟದ್‌ವರ್‌ಗು, ಒಂತರ ವಿಚಿತ್ರವಾಗಿ ನೋಡ್‌ತಿದ್ರು. ಪ್ರಸನ್ನ ಇಂತೊರ್ ಬಗ್ಗೆ ಯಾವತ್ತು ತಲೆ ಕೆಡಸಿಕೊಂಬೊ ಹುಡುಗನಾಗಿರಲಿಲ್ಲ, ಅವನಾಯಿತು ಅವನ ಇಸ್ಕೂಲಿನ ಬದುಕಾಯಿತು ಅನ್ನಂಗಿದ್ದವನು. ಇವನು ಅಲ್ಲಿ ಕೆಲಸಕ್ಕೆ ಸೇರಿಕೊಂಡ ಮೇಲೆ ಇಸ್ಕೂಲಿನ ಕಾಂಪೋಂಡು, ಬಾತ್‌ರೂಮುಗಳು, ತರಗತಿ ರೂಮುಗಳನ್ನ ನಿಗಿ ನಿಗಿಯನ್ನಂಗೆ ಸ್ವಚ್ಚವಾಗಿಟ್ಟುಕೊಂಡ. ಬರಿ ಡ್ರಿಲ್ಲು, ಕಬ್ಬಡಿ, ಕೊಕ್ಕೊ, ಎಂಬ ಆಟಗಳಲ್ಲಿ ಕಾಲ ಕಳೆಯದೆ. ಅವುಗಳ ಜೊತೆಗೆ ಎಂಟರಿಂದ ಹತ್ತನೆ ತರಗತಿ ಹುಡುಗುರುಗೆ, ಹಿಂದಿ ಪಾಠವನ್ನ ಮಾಡ್‌ತಿದ್ದ. ಹುಡುಗುರು ತೊಡೊ ಯೂನಿ ಫಾರಮ್ಮಿನಿಂದ ಹಿಡುಕೊಂಡು. ಇಡಿ ಹುಡುಗರ ನಯಾ-ನಾಜೋಕು, ಶಿಸ್ತು ಅನ್ನೋದನ್ನ ಕಣ್ಣಾಗೆ ಕಣ್ಣಿಟ್ಟು ನೋಡ್‌ಕಳತಿದ್ದ. ಅವತ್ತೇನಾದ್ರು ರೀತಿ ನೀತಿಯ ಬದುಕು, ಭೋದನೆ, ಅನ್ನೋದು ದಕ್ಕಿದರೆ ಅಪಾರ್‌ವಾಗಿ ಆನಂದ ಪಡತಿದ್ದ. ಒಟ್ಟಿನಲ್ಲಿ ಪ್ರಸನ್‌ಮೇಷ್ಟ್ರಿಗೆ ಇಸ್ಕೂಲೆ ಸರ‍್ವಸ್ವವಾಗಿತ್ತು,ಮ್ಯಾನೇಜ್ಮೆಂಟಿನವರು ಕೂಡ ಇವನ್ ಕಂಡ್ರೆ ಒಳ್ಳೇ ಮೇಷ್ಟ್ರು ಸಿಕ್ಕೀರು ಅನ್ನೊ ಖುಷಿಯಲ್ಲಿದ್ರು. ಇಂಗಾಗೆ ಇರ್‌ಬೇಕು, ಆ ಇಸ್ಕೂಲಿನಲ್ಲಿದ್ದ ಒಂದಿಬ್ರು ಮೇಷ್ಟ್ಗರುಗಳಿಗೆ ಇವನ್ ಮ್ಯಾಲೆ ಯಾವಾಗ್‌ಲು ಒಂದು ವಕ್ರದ ಕಣ್ಣು ಬಿಟ್ಟಿದ್ದರು, ಅವರು ಕನ್ನಡ ಮತ್ತೆ ಸಮಾಜ ಪಾಠ ಮಾಡೊ ಮೇಷ್ಟ್ರುಗಳು, ಬೆಲ್ಲಿಗೆ ಸರಿಯಾಗಿ ಬರ್‌ತ್ತಿದ್ದವರು,ಬಿಲ್ಲುಗಳು ಯಾವಾಗ ಆಗ್‌ತ್ತಾವಂತೊ? ಎಂದು ಲೆಕ್ಕಾಚಾರದಲ್ಲಿದ್ದ ಆ ಇಬ್ಬರಿಗು. ಪ್ರಸನ್ನನನ್ನು ಕಂಡರೆ ಮೈಯ್ಯಿ ಮನಸ್ಸುಗಳು ನವೆಯಾಗತೊಡಗಿದವು.

    ಪ್ರಸನ್ನ ಇಸ್ಕೂಲನ್ನ ಕುರುತು, ಪ್ರಗತಿಯನ್ನ ಕುರುತು,  ಮಕ್ಕಳನ್ನ ಕುರುತು,ಮಾತಾಡಕಂತೇನಾರ ಬಾಯಿತಗದ್ರೆ, ಓಹೊ ಇವನೊಬ್‌ನೆ ದೇಶ ಉದ್ದಾರ ಮಾಡಂಗ್ ಕಾಣ್‌ತಾನಲ, ಓಹೊ ಇವನಿಂದಾನೆ ಇಸ್ಕೂಲ್ ನಡಿತಾದೇನೊ? ಇವನಿಲ್ಲದಿದ್ರೆ ಸ್ಕೂಲೇ ಇಲ್ಲವೇನೊ? ಅಂಬಂಗಾಡ್‌ತಾನ್ ಕಣ್ರಿ. ಎಂದು ಸದಾ ಪ್ರಸನ್ನನ ಬೆನ್ನಿಂದೆ ಬೈಕಳತಿದ್ರು. ಈ ಕಾಲ ಈ ಜನ ಇರೋದೆ ಇಂಗೆ, ಮುಂದುವರಿಯೋರನ್ನ ಕಂಡ್ರೆ ಮೂಗು ಮುರಿತಾರೆ. ಪ್ರಸನ್ನ ಇಂತ ಯಾವ ಅಸೂಯೆಗಳಿಗು ತಲೆ ಕೆಡಿಸಿಕೊಂಡವನಲ್ಲ.

 ಅವರ ಇಸ್ಕೂಲಿನೊಳಗೆ ಕನ್ನಡ ಪಾಠ ಮಾಡ್‌ತಿರೊ ಮೇಷ್ಟ್ರು ಹರೀಶನೆನ್ನುವವನು, ದಿನ ಸಂಜೆ ಸ್ಪೆಷಲ್ ಕ್ಲಾಸ್ ಮಾಡ್‌ತಿದ್ದ. ಅಲ್ಲಿ ರಮ್ಯ ಎಂಬೊ ಒಂಬತ್ತನೇ ತರಗತಿ ಹುಡುಗಿ ಜೊತೆ, ಕದ್ದು ಮುಚ್ಚಿ ಚೆಲ್ಲಾಟ್‌ವಾಡ್‌ತ್ತಾನೆ ಅನ್ನುವ ಸುದ್ದಿ ಗೊತ್ತಾಗಿ. ಸುಮ್ಮನಿರಲಾರ್‌ದ ಪ್ರಸನ್ನ ಒಂದಿನ ಆ ಹುಡುಗೀನ ಪ್ರವೇಟಾಗಿ ಕರ್‌ದು ಬುದ್ದಿ ಮಾತೇಳ್‌ದ. ಅಲ್ಲೆ ನೋಡ್ರಿ ಪ್ರಸನ್ನನಿಗೆ ಬಲವಾದ ಪರ್‌ಪಾಟಾಗಿದ್ದು, ಮಾರ್‌ನೆ ದಿನ ಹುಡುಗಿಯ ಅಪ್ಪ ಅಮ್ಮ, ಊರಿನ್ ಜನವೆಲ್ಲ ಇಸ್ಕೂಲಿನ್ ಕಾಂಪೋಂಡಿನ ತುಂಬ ಜಮಾಯಿಸಿ ಬುಟ್ರು. ಹುಡುಗಿಯ ಅಪ್ಪ ಪ್ರಾಣಿ ಕುಲದವನಿರ್‌ಬೇಕು. ಪ್ರಸನ್ನನ ಕೊಳ್ಳು ಪಟ್ಟಿ ಹಿಡುಕೊಂಡು, ಏನಲೇ ಮುಠ್ಠಾಳ, ನನ ಮಗಳನ್ನ ರೂಮಿಗೆ ಕರದು ಕೈ ಮೈ ಮುಟ್ಟಿಕೊಂಡು, ಕೆಡಸಾಕ್ ನೋಡ್‌ದಂತಲ್ಲಲೇ? ಎಂದು ಹಿಗ್ಗಾ-ಮುಗ್ಗಾ ಚಚ್ಚಿ ಬಿಟ್ಟ,ಯವ್ವ ಯವ್ವ ಇಂತ ಸುಳ್ಳೇಳಿರುವ ಮೊಗುವಿನ ಮಾತನ್ನೇ ಇಸ್ಕೂಲಿನವರು, ಊರ್‌ನವರು, ಅಧಿಕಾರಿಗಳು, ಎಲ್ಲಾರು ನಂಬಿಬಿಟ್ಟ್ರು. ಅವನು ಯಾರ್ ಕಡೆ ಕೈ ಮುಗುದು ಎಂಗ್ ಬೇಡ್‌ಕಂಡ್ರು ಯಾರು ನಂಬಲಿಲ್ಲ. ಅದೇ ದಿವಸ ಬಿ.ಇ.ಓ ಸಾಯಬ್ರು ಮ್ಯಾನೇಜ್ ಮೆಂಟಿನವರು ಸೇರ್‌ಕಂಡು. ಪ್ರಸನ್ನನ್ನು ಕೆಲಸದಿಂದ ಕಿತ್ತೇ ಬುಟ್ರು. ಪೇಪರ್‌ನವರು ವಿದ್ಯಾರ‍್ಥಿನಿಗೆ ಲೈಂಗಿಕ ಕಿರುಕುಳ. ಮೇಷ್ಟ್ತಿಗೆ ಗೂಸ ಅಂತ ವರ‍್ಣನೆಯಾಗಿ ಬರ್‌ದೇ ಬುಟ್ರು. ಅವನು ಮಾಡದೇ ಇರೋ ತಪ್ಪಿಗೆ ಅಪಾರ್‌ವಾದ ಅವಮಾನ ಸೋಲು, ಯಾರಿಗೆ ತಾನೆ ಮನಸ್ಸಿನೊಳಗೆ ಮನಸಿದ್ದಾತು? ಅಂಗಾಗೆ ಹಿಟ್ಟು ನೀರು ಬಿಟ್ಟು ಮಕ್ಕೊಂದು ಬಟ್ಟೆ ಹೊದ್ದುಕೊಂಡು ಕುಂತುಬುಟ್ಟ. ಆವತ್ತು ಅಕ್ಕಯ್ಯನ ದುಃಖ ಕೇಳೊವರಿರಲಿಲ್ಲ. ಯಾವ್ ಬಂದು ಬಳಗವು ಹತ್ತಿರಕ್ಕೆ ಬಂದಿರ್‌ಲಿಲ್ಲ. ಅದೇ ನೆಲ ಕಾಣ್‌ದಿರೊ ಸ್ವಾದ್ರ ಮಾವನ ಮುಂದೆ. ಅನ್ಯಾಯವಾದ ಇಂತ ಕಥೆನ ಹೇಳ್‌ಕಂಡು, ಅಮ್ಮ-ಮಗ ಗಳ-ಗಳನೆ ಅತ್ತು ಬುಟ್ರು. ಇನ್ನು ಕುಂತು-ಕಡೇನೆ ಕುಂತು ಬುಟ್ಟು, ತಲೆ ಕೆಡಿಸಿಕೊಂಡ ಪ್ರಸನ್ನ ನನ್ನ ಕೈಯಿಗೆ ಸಿಗದಂಗಾಗ್‌ ಬುಡತ್ತಾನೆ. ಎಂದ ಅಕ್ಕಯ್ಯನ ಸಂಕಟವನ್ನ ಅರ‍್ಥೈಸಿಕೊಂಡ ಅವಳ ಅಣ್ಣನಾದವನು. ಬೆಂಗಳೂರಿನ ಯಾವುದೊ ಪ್ಯಾಕ್ಟ್ರೀಲಿ ಲೆಕ್ಕ ಬರೆಯೊ ಕೆಲಸ ಕೊಡಿಸಿದ್ದ. ಅವನ ಹೆಂಡತಿ ಕಡೆಯ ನೆಂಟರ ಮನೇಲಿ ವಾಸವಿರಲಿ ಅಂತ ಬಿಟ್ಟುಬಂದ. ಅಕ್ಕಯ್ಯನಿಗು ನಿರಾಳವಾಗಿತ್ತು, ಅವಳು ಎಂಗಾದ್ರು ಮಾಡಿ ಅವನನ್ನು ಒಂದು ದಡಾ ಸೇರಿಸುವ ಹಂಬಲದವಳು.

 ಅಂತದ್ದೊಂದು ಪ್ಯಾಕ್ಟ್ರಿ ಕೆಲಸಕ್ಕೆ ಸೇರ್‌ಕಂಡ ಮ್ಯಾಲೆ, ಪ್ರಸನ್ನ ದಿನ ಕಳದಂಗ್ ಕಳದಂಗೆ ದುಃಖವೆಂಬ ದೂಳಿಡುಕೊಂಡಿದ್ದ ಮನಸನ್ನ, ಕಾಲವೆಂಬ ಕಡ್ಡಿಯೊಳಗೆ ಕೊಡವಿ ಕೊಂಡ. ಹೊಸ ಬೆಂಗಳೂರು, ಹೊಸ ಕೆಲಸ, ಹೊಸ ಅಕ್ಕ ಬಾವನ ಮನೆ, ಹೊಸ ಹೊಸ ನೂರಾರು ತರಾವರಿ ಮಖಗಳು, ಊರಿಂದ ಬರುವಾಗ ಬಸ್ಸಿನೊಳಗೆ ಜೊತೇಲಿ ಕುಂತಿದ್ದ ಮಾವ, ಅಲ್ಲವಲ ನಿನ್ ಮಖ ನೀನ್ ತೊಳಕಳಾದ್ ಬುಟ್ಟು, ಆ ಹುಡುಗಿ ಮಖ ಯಾಕ್ ತೊಳಿಯಾಕೋಗಿದ್ದಲ? ಇದು ಬ್ಯಾರೆಯವರಿಗೆ ಬುದ್ದಿ ಹೇಳೊಂತ ಕಾಲ್‌ವಲ್ಲ ಕಣೊ? ಎಂದ ಮಾವನ ಮಾತಿಗೆ. ಇನ್ನೊಂದ್‌ಸಲ ಯಾರೊ ಕೆನ್ನೆಗೆರೆಡು ಪಟ-ಪಟನೆ ಹೊಡೆದಂತಾಯಿತು. ಅದಿಕ್ಕೆ ಇರ್‌ಬೇಕು  ಹನ್ನೆರಡನೇ ಶತಮಾನದ ಬಸವಣ್ಣನೆಂಬ ಪುಣಾತುಮ. ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ-ನಿಮ್ಮ ಮನವ ಸಂತೈಸಿಕೊಳ್ಳಿ, ಅಂತ ಘಂಟೆ ಬಾರ್‌ಸ್‌ದಂಗೆ ಹೇಳವರೆ. ಆದ್ರು ನಮಗೆ ಬುದ್ದಿ ಬರ್‌ಲಿಲ್ಲ, ಅವನ ಕಣ್ಣಂಚಲ್ಲಿ ಉದುರಿದ ಬೆಚ್ಚಗಿನ ಕಣ್ಣೀರು. ಇನ್ನೆಂದು ತೊಟ್ಟಿಕ್ಕಬಾರದು, ಅಂಬೊ ಭರವಸೇನ ಭದ್ರವಾಗಿಡುಕೊಂಡು. ಮಾವ ತೋರಿಸಿದ ಕೆಲಸಕ್ಕೋದವನು, ಅಚ್‌ಕಟ್ಟಾಗಿ ನೆಂಟರ ಮನೇಲಿ ಇರಂಗಾದ. ಜೊತಿಗೆ ಯಾರ್ ಯಾವೋಳ್ ಕತ್ತನ್ನಾರ ಇಸಗಲಿ, ನಾನಿನ್ನು ಕಣ್ಣೆತ್ತಿಯು ನೋಡಲ್ಲ ಅಂದುಕೊಂಡು ಅವನೊಳಗವನು ಶಪತ ಮಾಡ್‌ಕಂಡ.

   ಪ್ಯಾಕ್ಟ್ಯರಿಯ ಲೆಕ್ಕ ಪತ್ರಗಳ ಜವಾಬ್ದಾರಿ ಕೆಲಸವನ್ನ ಹಸನಾಗಿ ಮಾಡ್‌ತಿದ್ದ. ಅವನಿಗೆ ಆಶ್ರಯ ಕೊಟ್ಟಿರುವ ಅಕ್ಕ ಬಾವನ ಜೊತೇಲಿ ಆನಂದ್‌ವಾಗಿ ಹೊಂದಿಕೊಂಡ. ಅವರು ಪ್ರಸನ್ನನಿಗು ದೂರದ ಸಂಬಂದಿಕರು,  ಆದ್ರು ಈ ಹುಡುಗನ್ನ ಅಕ್ಕರೆಯಿಂದಾನೆ ನೋಡ್‌ಕಳತಿದ್ರು, ಅವನು ಅಷ್ಟೇ ಪುಗಸಟ್ಟೆ ಉಣುತ್ತಿರ್‌ಲಿಲ್ಲ. ಅವನಿಗೆ ಬರೊ ಸಂಬಳ್‌ದಲ್ಲಿ,ಆ ಮನೆಯ ಖರ‍್ಚಿಗು ಕೊಡ್‌ತ್ತಿದ್ದ. ಅವರಮ್ಮನ ಜೀವನಕ್ಕೆ ಊರಿಗು ಕಳಸ್‌ತ್ತಿದ್ದ. ಇಂತ ನಿರಾಳದ ದಿನಗಳಲ್ಲಿ ಆ ಮನೆಯ ಅಕ್ಕನ ಗಂಡ ಬಾವನೆನ್ನುವವನು. ರಾತ್ರಿ ಹೊತ್ತು ಕುಡುದ್ ಬರ್‌ತಿದ್ದೋನು. ಯಾಕೊ ಈಗೀಗ ಸ್ವಲ್ಪ ಜಾಸ್ತೀನೆ ಕುಡುದ್ ಬರಾಕಿಡದ. ಅಕ್ಕ ತುಂಬ ಹೂವಿನಂತ ಮನಸ್ಸಿನವಳು, ಅವಳು ದಿನಾರಾತ್ರಿ ಗಂಡನ ಅವತಾರ್‌ವನ್ನ ನೋಡಿ-ನೋಡಿ ಕಣ್ಣೀರಲ್ಲಿ ಕೈ ತೊಳಿಯಂಗಾದ್ಲು. ಅವಳ ಅಸ್ಸಹಾಯಕತೇನ ನೋಡ್‌ತಾ ಇದ್ರೆ, ಪ್ರಸನ್ನನ ಕರುಳೆಲ್ಲ ನುಳುಚಾಡುವಂತ ಸಂಕಟವಾಗುತ್ತಿತ್ತು. ಬಂಗಾರ್‌ದಂತ ಹೆಂಡತಿ ಕೈತೊಳೆದು ಮುಟ್ಟುವಂತ ಬಣ್ಣದವಳು, ಭಯ ಭಕುತಿಯ ಹುಡುಗಿ, ಅವಳಿಗೆ ಮುದ್ದಾಗಿದ್ದ ಎರಡು ಗಂಡುಡುಗುರು, ಆ ಬಾವನನ್ನ ಏನಾದ್ರು ಮಾಡಿ ಸರಿದಾರಿಗ್ ತರ್‌ಬೇಕು, ಎಂಗಾರ ಮಾಡಿ ಕುಡಿಯೋದ್ ನಿಲ್ಲಸ್‌ಬೇಕಂತ್ಲೆ ಪ್ರಸನ್ನ ಬಾರಿ ಹಂಬಲಸಿಬುಟ್ಟ.

  ಒಳ್ಳೆ ಹತ್ತು ಗಂಟೆಯ ರಾತ್ರಿ ಹೊತ್ತಿನೊಳಗೆ. ಆ ಮಾವನಾದವನು ತೂರಾಡಿಕೊಂಡು ಬಂದು. ಹೊಸಿಲು ದಾಟ್‌ಲಾರ್‌ದೆ ಒದ್ದಾಡಿ ಬಿದ್ದುಬಿಟ್ಟ, ಅಂತವನನ್ನು ಪ್ರಸನ್ನ ಬುಜ ಹಿಡಿದೆತ್ತಿ ಒಳಕ್ಕೆ ಎಳಕಂಡು ಬಂದು ಮಲಗಿಸಿದ. ಬೆಳಿಗ್ಗೆ ನಿಚ್ಚಳವಾದ ಬೆಳಕು,ಇದೇನ್ ಭಾವ ನೀನಿಂಗ್ ಕುಡೀತಾ ಇದ್ರೆ ನಿನ್ನೆಂಡ್ರು ಮಕ್ಕಳ ಪಾಡು ಏನಾಗ್‌ಬೇಕೇಳು? ಅಂದ ಪ್ರಸನ್ನನ ಮಾತು ಬೆಳಕಿನಂತೆ  ಬಲವಾಗಿತ್ತು.ನಿನ್ಯಾವನಲೆ ನನ್ನನ್ನ ಕೇಳಾಕೆ? ನನ್ ದುಡ್ಡು ನನ್‌ಕಾಸು, ನೀನ್ ಬಂದಿರಾದು ನಮ್ಮನೆ ಹಿಟ್ಟಿಗೆ. ಅಂತ ಹಿಟ್ಟು ಎಷ್ಟೈತೋ ಅಷ್ಟು ಮಾತಾಡಲೆ? ಅಂದು ಬುಟ್ಟ. ಪ್ರಸನ್ನನಿಗೆ ಮತ್ತೆ ಇನ್ನೊಂದ್ ಸಲ ಯಾರೊ ಮಕ್ಕೊಡದಂಗಾಯಿತು. ಆವತ್ತು ಹಿಟ್ಟು ಇಳಿಲಿಲ್ಲ, ನೀರು ಇಳಿಲಿಲ್ಲ, ಆವತ್ತಿನಿಂದ ಬಾವನೆಂಬೋನು ನೆಟ್ಟಗೆ ಮಾತಾಡಸದಂಗಾದ, ಅಕ್ಕ ಅನುಮಾನವಿಲ್ಲದಂಗೆ ಮಾತಾಡ್‌ತಿದ್ದವಳು, ಗಂಡನ್ ಜೊತೆ ಹಾಸಿಗೆ ಸುಖ ಸಿಗುತಿತ್ತೊ? ಇಲ್ಲವೊ? ಅಂಗೆ ಇನ್ನೊಂದಿನ ಆ ಗಂಡನಾದವನು ಕುಡುದಿರೊ ಅಮಲಿನೊಳಗೆ ಮೈ ಮರೆತು ಮಲಿಕ್ಕೆಂಡುಬುಟ್ಟ. ಆ ವಠಾರದ ಜನವು ಅಂಗು ಇಂಗು ಲೈಟೆಲ್ಲ ಕೆಡಿಸಿ ಮಲಗಿಬಿಟ್ಟಿದ್ರು, ಎಲ್ಲ ಅವರವರ ಸೋಲು ಸಂಕಟಗಳನ್ನ, ಸುಖ ಸಮಾದಾನಗಳನ್ನ ಮರೆತು. ತಲೆ ನೆಲಕಚ್ಚಿಸಿದ್ದ ಸರುವೊತಿನೊಳಗಿನ ಒಂದು ಗಂಟೆ ಸಮೇವಿನೊಳಗೆ. ಹಸನಾದ ಅಕ್ಕಯ್ಯ ಎಂದು ಭಾವಿಸಿಕೊಂಡಿದ್ದ ಪ್ರಸನ್ನನ ಪಕ್ಕ, ಅವಳು ಬಂದುಬಿಟ್ಟು ಅಚ್ಚು ಕಟ್ಟಾಗಿ ಮಲಗೆ ಬಿಟ್ಲು. ಆ ಗಳಿಗೇಲೆ ಮೈ ಮೇಲೆ ಹಾವು ಹರ್‌ದಾಡದಂಗಾಗಿ, ಮಿಟ್ಟು ಬಿದ್ದು ಎದ್ದು ಬುಟ್ಟ. ನೋಡು ನಾನೆಳ್‌ದಂಗೆ ಕೇಳ್‌ದೆ ಹೋದ್ರೆ, ನೀನೆ ಹಿಡಕಳಾಕ್ ಬಂದಿದ್ದೆ ಅಂತ ನನ್ ಗಂಡುಗೇಳ್‌ಬಿಡತ್ತೀನಿ ಅಂದ್ಲು.ಪ್ರಸನ್ನ ಆ ಗಳಿಗೆಯಲ್ಲೆ ಆಗೆದ್ದು ದಡಾರ್‌ನೆ ಮನೆ ಬಿಟ್ಟು ಈಚೆ ಬಂದವನು, ನಡು ರಸ್ತೇಲೆ ಕುಂತು ಬಿಟ್ಟ. ಅಲ್ಲಿದ್ರೆ ಅಂಗಾಯಿತು, ಇಲ್ಲಿಗೆ ಬಂದ್ರೆ ಇಂಗಾಯಿತು, ಈಗ ಊರಲ್ಲಿ ಈ ಕತೇನ ಹೇಳ್‌ತಾ ಕುಂತ್ರೆ, ಅಮ್ಮ ಕೇಳೀರು ಕೇಳ್ ಬೋದೇನೊ? ಮಾಮ ಮಾತ್ರ ಸುತಾರಾಂ ಕೇಳಲ್ಲ ಅನುತ ಕಣ್ಣೊರೆಸಿಕೊಂಡ. ಬೆಳಗ್ಗೆ ಇನ್ನು ನೆಟ್ಟಗೆ ಬೆಳಕರ್‌ದಿರ್‌ಲಿಲ್ಲ, ಅವನ ಬಟ್ಟೆ ಬರೇನು ಮುಟ್ಟುದಂಗೆ, ಹುಟ್ಟು ಬಟ್ಟೇಲೆ ಬೆದರಿದ ಬೊಂಬೆಯಂಗೆ ಆ ಬೆಂಗಳೂರೆಂಬೊ ಬೆಂಗಳೂರನ್ನೆ. ಬಿಟ್ಟು ಊರಿಗೆ ಬಂದು ಬುಟ್ಟ.ಅಂಗೆ ಬಂದವನು ಬಂದು ಅಮ್ಮನಿಗೆ ಏನೊಂದು ಬಾಯಿಬಿಟ್ಟು ಹೇಳ್‌ಲಿಲ್ಲ. ಅವಳು ಕಾರಣ ಕೇಳಿ-ಕೇಳಿ ಅತ್ತ ಕೈ ಸೋಸಿ ಸುಮ್ಮನಾದಳು.  

  ಇಂತ ಪ್ರಸನ್ನನಿಗೆ  ನೆಲ ಕಾಣ್‌ದಂಗೆ ಓಡಾಡುವ ಸ್ವಾದ್ರ ಮಾವ ಎಂಬೋನು, ಬಿ, ಕಾಂ ಮುಗಿಸಿರುವ ಕಿರೆ ಮಗಳನ್ನ ಕೊಟ್ಟು ಮದುವೆ ಮಾಡ್‌ಬುಟ್ಟ. ಅಷ್ಟು ಸಲೀಸಾಗಿ ಮಾವ ಅವರ ಲೆವಲ್ಲಿನ ಮಗಳನ್ನ ಕೊಟ್ಟು ಮದುವೆ ಮಾಡ್‌ತಿದ್ದವನಲ್ಲ. ಅವಳು ಜಾತಿಯಿಲ್ಲದ ಯಾವುದೊ ಹುಡುಗನ ಕೂಟೆ, ಸರಸಕ್ಕೆ ನಿಂತಿರೋದನ್ನ ಮನಗಂಡು. ಎಲ್ಲುಡುಕೀರು ಗಂಡು ಸಿಗದಂಗಾಗಿ, ವಿದಿ ಇಲ್ಲದೆ ಪ್ರಸನ್ನನಿಗೆ ಗಂಟಾಕಿದ್ದ. ಅಪ್ಪಯ್ಯ ಅಲ್ಲು ಕೆಟ್ಟೆ, ಇಲ್ಲು ಕೆಟ್ಟೆ,ಮಾವನ್ ಮಾತು ಕೇಳ್‌ದೆ ಹೋದ್ರೆ, ನಮಗ್ಯಾರಪ್ಪ ದಿಕ್ಕು ಅಂದ ಅಮ್ಮನ ಮಾತು ನೆಚ್ಚಿಕೊಂಡು. ಅವಳನ್ನ ಮದುವೆಯಾದ, ಆ ಹುಡುಗಿ ಮದುವೆಯಾಗಿ ಆರು ತಿಂಗಳು ನೆಟ್ಟಗೆ, ಇವನು ಕೂಟೆ ಇರ್‌ದಂಗೋಗಿ ತವರ್‌ಮನೆ ಸೇರ್‌ಕೊಂಡ್ಲು. ಇವತ್ತು ಬರ್‌ತ್ತಾಳೆ, ನಾಳೆ ಬರ್‌ತ್ತಾಳೆಂದು ಕಾದು ಕುಂತ ತಾಯಿಮಗನಿಗೆ, ಈ ವಾರದಿಂದೆ   ಅವಳು ತವರು ಮನೇಲು ಇಲ್ಲದಂಗೆ ಓಡೋದ್ಲಂತೆ. ಅನ್ನುವ ಸುದ್ದಿ ಗೊತ್ತಾಯಿತು.ಇಂಗೆ ನುಂಗಾಕು ಆಗ್‌ದೆ, ಉಗಿಯಾಕು ಆಗ್‌ದೆ, ಬಾಯಿ ಬಿಟ್ರೆ ಬಣ್‌ಗೇಡು ಅನ್ನಂಗಾಗಿ, ಇಂತ ವಿಷ ಗಳಿಗೆಗಳಿಗೆ, ಗೆಪುತಿಯೆಂಬ ತ್ಯಾಪೆ ಹಚ್ಚಿಕೊಂಡು ಕುಂತಿರುವ ಮಗ. ಏನಾಗ್‌ತ್ತಾನೊ? ಎಂಬ ಭಯಕ್ಕೆ ಕಟ್ಟು ಬಿದ್ದ ನಮ್ಮಕ್ಕಯ್ಯ. ಎದ್ದೋಳಲ ಪ್ರಸನ್ನ, ನಾನಿರಾತಂಕ ನೀನು ಚಿಂತೆ ಮಾಡ್‌ಬ್ಯಾಡೆನ್ನುವ ಭರವಸೆಯ ಕುಡುಗೋಲಿನಲ್ಲಿ. ಅವಳ ಎದೆಯೊಳಗೆ ಬೇರು ಬಿಟ್ಟುಕೊಂಡು ಬಲಿಯುತಿದ್ದ. ಚಿಂತೆಯ ಪೈರುಗಳನ್ನ ಕುಯ್ಯಾಕಿಡಿದಳು. ಆದ್ರೆ ಅವನಂತು ಅಕ್ಕಯ್ಯನ ಮಾತನ್ನ ನಿಗಾ ಮಾಡ್‌ದಂಗೆ. ಅವನು ಕುಂತಿರೊ ನೆಲ ಗೆದ್ದಲತ್ತುವಂತೆ ಕುಂತೇ ಕುಂತು ಬುಟ್ಟ.


3 thoughts on “ಡೊಂಕು

  1. ಸುಂದರವಾದ ಕಥೆ. ಮಧುಗಿರಿ ಸುತ್ತ ಮುತ್ತು ಇರುವ ಜನರ ಭಾಷೆಯ ಅತ್ಯುತ್ತಮ ಬಳಕೆಯನ್ನು ಮಾಡಿಕೊಂಡ ಸುಂದರವಾದ ಕಥೆ.

Leave a Reply

Back To Top